ಶಿವರಾಂ, ಎಂ
	1905-84 ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ವೃತ್ತಿಯಲ್ಲಿ ವೈದ್ಯರಾದ ಇವರು ರಾ.ಶಿ. ಎಂಬ ಹೆಸರಿನಲ್ಲಿ ಅನೇಕ ಹಾಸ್ಯಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ತಮ್ಮ ವೃತ್ತಿಗೆ ಸಂಬಂಧಿಸಿದಂತೆಯೂ ಇವರು ಗ್ರಂಥಗಳನ್ನು ರಚಿಸಿದ್ದಾರೆ. ನಗೆಬರೆಹಗಳಿಗೇ ಮೀಸಲಾದ ಕೊರವಂಜಿ ಎಂಬ ಮಾಸಪತ್ರಿಕೆಯನ್ನು ಸ್ಥಾಪಿಸಿ, ಇಪ್ಪತ್ತೈದು ವರ್ಷಗಳ ಕಾಲ ನಡೆಸಿ ಶುದ್ಧ ಹಾಸ್ಯಸಾಹಿತ್ಯ ಸೃಷ್ಟಿಗೆ ಕಾರಣರಾದರಲ್ಲದೆ, ಅನೇಕ ಹೊಸ ಬರೆಹಗಾರರ ಹಾಗೂ ವ್ಯಂಗ್ಯ ಚಿತ್ರಕಾರರ ಪ್ರತಿಭೆಯನ್ನು ಗುರುತಿಸಿ  ಬೆಳೆಸಿದರು. ಇವರು 1905 ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಆಗಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಒಬ್ಬ ಅಧಿಕಾರಿಯಾಗಿದ್ದರು. ದೊಡ್ಡ ಸಂಸಾರದಲ್ಲಿ ಹುಟ್ಟಿದ ಇವರು ಕಷ್ಟಪಟ್ಟು ವಿದ್ಯೆಗಳಿಸಿ ವೈದ್ಯಶಿಕ್ಷಣ ಪಡೆದು ಸ್ವತಂತ್ರವಾಗಿ ವೃತ್ತಿಯನ್ನಾರಂಭಿಸಿದರು. ದಕ್ಷ ವೈದ್ಯರೆಂದು ಖ್ಯಾತಿಗಳಿಸಿದರು. ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದರು (1955). 

	ತಮ್ಮ ವಿಶಾಲವಾದ ಲೋಕಾನುಭವದ ತಳಹದಿಯ ಮೇಲೆ ಪ್ರತಿಭೆಯನ್ನು ರೂಪಿಸಿಕೊಂಡ ಇವರು ಕನ್ನಡದಲ್ಲಿ ವಿರಳವಾಗಿದ್ದ ಹಾಸ್ಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದರು. 1942ರಲ್ಲಿ ಇವರು ಆರಂಭಿಸಿದ ಕೊರವಂಜಿ ಪತ್ರಿಕೆ ಇಂಗ್ಲಿಷ್‍ನ ಪಂಚ್ ಮಾದರಿಯಲ್ಲಿ ಕನ್ನಡ ಓದುಗರ ಮೇಲೆ ತನ್ನದೇ ಛಾಪು ಒತ್ತಿತ್ತು. ಆದರೆ ಬದಲಾದ ಪರಿಸರದಲ್ಲಿ ಅದನ್ನು ನಡೆಸುವುದು ಹೆಚ್ಚು ಹೆಚ್ಚು ಕಷ್ಟವಾಗತೊಡಗಿದಾಗ ಆ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು (1967). ಆದರೆ ಆ ಪತ್ರಿಕೆಯಲ್ಲಿ ಇವರು ಆರಂಭಿಸಿದ ಉರಿಗಾಳು ಮುಂತಾದ ಹಾಸ್ಯದ ಅಂಕಣಗಳು ತುಂಬ ಪ್ರಸಿದ್ಧವಾದುವು. ಕೊರವಂಜಿ ನಿಂತಮೇಲೂ ಇವರು ಇತರ ಪತ್ರಿಕೆಗಳಲ್ಲಿ ಈ ರೀತಿಯ ಬರೆಹವನ್ನು ಮುಂದುವರಿ ಸಿದ್ದರು. ಕೊರವ, ಅರವಾಮೊದ್ದು, ಜಗ್ಗೋಜಿ, ಅಡುಗೂಲಜ್ಜಿ ಮುಂತಾದ ಪಾತ್ರಗಳೂ ಹೆಬ್ಬಿಗುಬ್ಬಾಲೆ ಮುಂತಾದ ಸ್ಥಳಗಳೂ ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಚಿರಂತನವಾಗಿವೆ. ತುಟಿ ಮೀರಿದುದು ಎಂಬುದು ಇವರ ಪ್ರಸಿದ್ಧ ಹಾಸ್ಯ ಬರೆಹಗಳ ಸಂಕಲನಗಳಲ್ಲೊಂದು. ಒಂದಾನೊಂದು ಕಾಲದಲ್ಲಿ ಎಂಬುದರಲ್ಲಿ ಪ್ರಾಣಿ ಕಥೆಗಳ ಮಾದರಿಯಲ್ಲಿ ಬರೆಯಲಾದ ವಿಡಂಬನ ಲೇಖನಗಳಿವೆ. ಕಾರ್ತೀಕ ಸೋಮವಾರ ಇವರ ಒಂದು ಕಾದಂಬರಿ. ಬುದ್ಧೋಜಿಯ ಕಥೆಗಳು ಇವರ ಇನ್ನೊಂದು (1979) ಕೃತಿ. 

	ಇವರು ಬರೆದಿರುವ ಮನೋನಂದನ ಎಂಬುದು ಇವರೇ ಹೇಳಿರುವಂತೆ ಮನೋದೈಹಿಕ ಬೇನೆಗ ಳನ್ನು ಕುರಿತು ರೋಗಿಗಳಿಂದ ಕಲಿತ ಪಾಠಗಳು. ಇದು ರೋಗಿಗಳ ಅಂತರಂಗದ ಹುಣ್ಣಿಗೆ ಕನ್ನಡಿ ಹಿಡಿದಿದೆ. ದೈಹಿಕ ಬೇನೆಗಳಿಗೂ ಮಾನಸಿಕ ವಿಕಾರಗಳಿಗೂ ಇರುವ ಸಂಬಂಧವನ್ನು ತಿಳಿಸುವ ಈ ಪುಸ್ತಕದಲ್ಲಿ ಇವರ ವೃತ್ತಿಜೀವನದ ಆಳವಾದ ಹಾಗೂ ವಿಶಾಲ ವಾದ ಅನುಭವವನ್ನು ಕಾಣಬಹುದು. ಇಲ್ಲಿಯದು ಅತ್ಯಂತ ಸುಲಭವಾದ ಶೈಲಿ. ಮನಮಂಥನ ಎಂಬುದು ಇಂಥದೇ ಇನ್ನೊಂದು ಗ್ರಂಥ. ಇಂದು ಸಾಮಾನ್ಯವಾಗಿರುವ ಮಾನಸಿಕ ಬೇನೆಗಳ ಲಕ್ಷಣಗಳನ್ನು ಇಲ್ಲಿ ಕಥೆಯಂತೆ ವಿವರಿಸಲಾಗಿದೆ. ಈ ಬೇನೆಗಳಿಗೆ ಪಾಶ್ಚಾತ್ಯ ಚಿಕಿತ್ಸಾ ವಿಧಾನಗಳಿಂದ ಹಿಡಿದು ಪತಂಜಲಿಯ ಯೋಗಸೂತ್ರ, ಭಗವದ್ಗೀತೆ ಮುಂತಾದವುಗಳಲ್ಲಿ ಸೂಚಿತವಾಗಿರುವ ಮಾರ್ಗಗಳವರೆಗೆ ಪರಿಹಾರ ಗಳನ್ನು ಸೂಚಿಸಿದೆ. ಅತ್ಯಂತ ಹೃದ್ಯವಾದ ಈ ಶಾಸ್ತ್ರಸಾಹಿತ್ಯ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ (1976). ಇವರು ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದರು(1978-80). ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ(1970), ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ(1971, 1976), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1976) ಪಡೆದಿದ್ದಾರೆ. ಇವರು 1984 ಜನವರಿ 13ರಂದು ನಿಧನರಾದರು.	     		
	 (ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ